ಸತ್ಯಕ್ಕ
	ಸು. 1160. ಶಿವಶರಣೆ ಹಾಗೂ ವಚನಕಾರ್ತಿ. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಹಿರೇಜಂಬೂರಿನವಳು. ಈ ಊರಿನಲ್ಲಿ ಈಕೆ ಯದು ಎನ್ನಲಾದ ಒಂದು ದೇವಾಲಯವಿದೆ. ಶಿವಭಕ್ತರ ಮನೆಯ ಕಸ ಗುಡಿಸುವುದು ಈಕೆಯ ಕಾಯಕ.

	(ಬಿ.ಎಸ್.)

	ಈಕೆಯದು ಏಕದೇವತಾನಿಷ್ಠೆ. ಇದನ್ನು ಕುರಿತು ವೀರಶೈವ ಕವಿಗಳೆ ಲ್ಲರೂ ಹೇಳಿದ್ದಾರೆ. ಒಮ್ಮೆ ಶಿವ ಈಕೆಯನ್ನು ಪರೀಕ್ಷಿಸಲು ಭಿಕ್ಷುಕ ವೇಷದಿಂದ ಬಂದ. ಈಕೆ ಭಿಕ್ಷೆ ನೀಡುವಾಗ ಕಾಳು ಕೆಳಗೆ ಬಿತ್ತು. ಆಗ ಭಿಕ್ಷುಕ ಹರಿಯಿಂದ ಹರಿದ ಕಾಳು ನೆಲಕ್ಕೆ ಬಿತ್ತು ಎಂದ. ಹರಿ ಎಂಬ ಶಬ್ದ ಕೇಳಿದೊಡನೆಯೇ ಅನ್ಯದೇವತಾ ಸ್ಮರಣೆಯನ್ನು ಸಹಿಸದೆ ಅಲ್ಲಿದ್ದ ಹುಟ್ಟಿನಿಂದಲೇ ಅವನಿಗೆ ಹೊಡೆದಳಂತೆ. ಆಗ ಶಿವ ಇವಳ ನಿಷ್ಠೆಗೆ ಮೆಚ್ಚಿ ವರಕೊಡಲು ಹೋದಾಗ ಈಕೆ ಅದನ್ನು ನಿರಾಕರಿಸಿ ಅವನಲ್ಲೇ ಐಕ್ಯಳಾದಳಂತೆ. ಈ ವಿವರಗಳನ್ನು ಶಿವತತ್ತ್ವ ಚಿಂತಾಮಣಿ, ಸೋಮನಾಥಪುರಾಣ, ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ, ಚೆನ್ನಬಸವಪುರಾಣ ಮುಂತಾದ ಗ್ರಂಥಗಳಲ್ಲಿ ಕಾಣಬಹುದು.	
								
	(ಎ.ಎಮ್.)

	ಈಕೆಯ 29 ವಚನಗಳು ದೊರಕಿವೆ. ಶಂಭುಜಕ್ಕೇಶ್ವರ ಎಂಬುದು ಇವಳ ವಚನಗಳ ಅಂಕಿತ. ಈಕೆಯ ವಚನಗಳು ಸರಳ ಹಾಗೂ ನೇರ ನುಡಿಗಳಲ್ಲಿ ಮೂಡಿಬಂದಿವೆ. ಅಂತರಂಗದಲ್ಲೊಂದು ಬಹಿರಂಗದ ಲ್ಲೊಂದು ರೀತಿಯಲ್ಲಿ ನಡೆಯುವವರನ್ನು ಈಕೆ ಕಟುವಾಗಿ ಟೀಕಿಸಿದ್ದಾಳೆ. ಬಾಹ್ಯಾಡಂಬರವನ್ನು ಕುರಿತ ಈಕೆಯ ಒಂದು ವಚನ ಹೀಗಿದೆ : 
ಅರ್ಚನೆ ಪೂಜನೆ ನೇಮವಲ್ಲ
ಮಂತ್ರತಂತ್ರ ನೇಮವಲ್ಲ
ಧೂಪದೀಪಾರತಿ ನೇಮವಲ್ಲ
ಪರಧನ ಪರಸ್ತ್ರೀ ಪರದೈವಂಗಳಿಗೆ¾ಗದಿಪ್ಪುದೆ ನೇಮ
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ				
			 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ